ಕಾರವಾರ, ಜನವರಿ 6: ಕರ್ನಾಟಕ ಹಾಗೂ ಗೋವಾ ರಾಜ್ಯಗಳಿಗೆ ಪ್ರಮುಖವಾಗಿರುವ ಕಾಳಿ ಸೇತುವೆ ದುರಸ್ತಿಗಾಗಿ ನಿನ್ನೆಯಿಂದ ಸ್ಥಗಿತಗೊಳಿಸಲಾಗಿದ್ದು ಪ್ರಥಮ ದಿನದಂದು ಜನರಿಗೆ ಬವಣೆ ಅನುಭವಕ್ಕೆ ಬಂದಿದೆ.
ಕಾರವಾರ ಜಿಲ್ಲಾ ಆಡಳಿತದ ಆದೇಶರ ಪ್ರಕಾರ ಪ್ರಮುಖ ದುರಸ್ತಿಗಾಗಿ ಒಟ್ಟು ಒಂದು ತಿಂಗಳು ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಸೇತುವೆ ಮೇಲೆ ಕೇವಲ ದ್ವಿಚಕ್ರವಾಹನ ಹಾಗೂ ಪಾದಾಚಾರಿಗಳಿಗೆ ಮುಕ್ತವಾಗಿದ್ದು ಹೆಚ್ಚಿನ ಬಸ್ ಪ್ರಯಾಣಿಕರು ಮೂರು ಕಿ.ಮೀಗಳ ದೂರವನ್ನು ನಡೆದೇ ಕ್ರಮಿಸಬೇಕಾಯಿತು.
ಸೇತುವೆ ದುರಸ್ತಿ ಸಮಯದಲ್ಲಿ ದೋಣಿಗಳನ್ನು ಒದಗಿಸಿಕೊಡುವುದಾಗಿ ಆಡಳಿತ ಮಂಡಳಿ ಸೂಚನೆ ನೀಡಿದ್ದರೂ ಸೂಕ್ತ ನಿರ್ದೇಶನಗಳಿಲ್ಲದ ಕಾರಣ ಜನತೆ ಹೆಚ್ಚಿನ ಬವಣೆ ಪಡಬೇಕಾಗಿ ಬಂದಿದೆ.
ಸೇತುವೆಯ ಇಕ್ಕೆಲಗಳಲ್ಲಿ ಕರ್ತವ್ಯದ ಮೇಲಿದ್ದ ಅಧಿಕಾರಿಗಳು ಜನರಿಗೆ ದೋಣಿ ಉಪಯೋಗಿಸುವಂತೆ ನಿರ್ದೇಶಿಸಿದರೂ ದೋಣಿ ನಿಲ್ಲುವ ಸ್ಥಳ ಅಲ್ಲಿಂದ ದೂರವಿದ್ದ ಕಾರಣ ಜನರು ಬಿರುಬಿಸಿಲಿನಲ್ಲಿ ನಡೆದೇ ಹೋಗಬೇಕಾಯಿತು.
ಸೇತುವೆ ಬಳಿ ಜನರನ್ನು ಇಳಿಸುವ ಬದಲು ದೋಣಿಗಳ ಬಳಿಯಲ್ಲಿಯೇ ಇಳಿಸಿದರೆ ಅನುಕೂಲಕರ ಎಂದು ಹೆಚ್ಚಿನ ಜನರ ಅಭಿಪ್ರಾಯವಾಗಿತ್ತು.
ಜನಸಾಮಾನ್ಯರೊಂದಿಗೆ ಕಾರವಾರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಲೋಕಾಯುಕ್ತ ಸಂತೋಷ್ ಹೆಗಡೆಯವರೂ ದೋಣಿಯ ಮೂಲಕ ಪ್ರಯಾಣಿಸಿ ನದಿ ದಾಟಿದರು.
ಸೇತುವೆ ಮುಚ್ಚಿರುವ ಅವಧಿಯಲ್ಲಿ ಸೂಕ್ತ ವ್ಯವಸ್ಥೆ ಒದಗಿಸುವಂತೆ ಸಾರ್ವಜನಿಕರು ಆಡಳಿತವರ್ಗಕ್ಕೆ ಆಗ್ರಹಿಸಿದ್ದಾರೆ.
ಕಾಳಿ ಸೇತುವೆ ದುರಸ್ತಿ ಕಾರಣ ಜನರಿಗೆ ಅನುಕೂಲಕರವಾಗುವಂತೆ ಹೆಚ್ಚುವರಿ ರೈಲುಗಳನ್ನು ಪ್ರಾರಂಭಿಸಲು ಕೊಂಕಣ ರೈಲ್ವೇ ನಿರ್ದೇಶಿಸಿದೆ. ಕಾರವಾರ ಹಾಗೂ ಮಡ್ಗಾಂವ್ ನಡುವೆ ಬುಧವಾರದಿಂದ ಶುಕ್ರವಾರದವರೆಗೆ ವಿಶೇಷ ರೈಲುಗಳನ್ನು ಬಿಡಲಾಗುವುದು ಎಂದು ಕೊಂಕಣ ರೈಲ್ವೇ ಕಾರ್ಪೋರೇಶನ್ ಪ್ರಕಟಿಸಿದೆ.